Sunday, July 16, 2006

ಅಂಕ

ಇಲ್ಲಿ ಅಂಕ ಎಂಬ ಪದವನ್ನು ಪ್ರಶಂಸೆ ಎಂದು ಪರಿಗಣಿಸತಕ್ಕದ್ದು :)

ಬಸಿದಾ ನೀರೂ ಆವಿಯಂಗೆ ಹಾರಿ,
ಮುಂಜಾವಿನ ಶೀತಕ್ಕೆ ಹನಿಗಳಾಗಿ ಕೂಡಿ,
ಒಂದೊಂದು ಮುತ್ನಂತೆ ಬಿದ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಕಾರ್ಮೋಡ ಜಡಿಹಿಡಿದು ಮುಂದಕ್ಕೆ ಬಾಗಿ,
ಸೊರಗಿದಾ ಭೂಮ್ಯಾಗೆ ಜೀವಕಳಿ ತುಂಬಿ,
ಮೈದುಂಬಿ ನನ್ ತಾಯಿ ನಕ್ಯಾಳ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಬಿಳಿ ಹಾಲ ಕೆನ್ಯಾ ಒಂದೆಡೆ ಕಲೆ ಹಾಕಿ,
ಕತ್ಲಾದ ಬಾನಲ್ಲಿ ದೀಪದ ಬಳ್ಳಿ ಬೆಳಗಿ,
ಸರಧಾಂಗೆ ತಾರೆಗಳ ಪೊಣ್ಸ್ಯವ ನೋಡ;
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

ಚೈತ್ರದಲಿ ಮಾಮರದಿ ಕೋಗಿಲೆಯು ಕೂಗಿ,
ಮುಸ್ಸಂಜೆ ಬೆಳಕಲ್ಲಿ ಆರತಿಯು ಬೆಳಗಿ,
ಜೊತೆಯಾಗಿ ಸ್ವಾಗತವ ಕೋರ್ಯಾವ ನೋಡ,
ಗೆಳತಿ, ಅಂಕ ನೀಡಿ ಮುಂದ್ ಹೋಗಬ್ಯಾಡ!

-ರಮೇ

Sunday, July 02, 2006

ವರ್ಷಧಾರ

ಬೆತ್ತಲಗಿದ್ದ ಭೂಮಿ ನಾಚಿ ನೀರ್ ಕೇಳಿರಲು,
ಮೋಡಗಳು ನರ್ತಿಸುತ್ತ, ತಮ್ಮ ಅಂಗಗಳ ನೇವರಿಸಿ,
ಮುದುಡಿದ ಮೊಗದ ಮೇಲೆ ಮುತ್ತಿನ ರಾಶಿಯ ಸುರಿಸಿದ ಹಾಗೆ,
ಅವಳ ಅಡಿಅಡಿಯನ್ನು ಪನ್ನೀರಿನಿಂದ ನೆನೆಸಿತು.

ಉಬ್ಬಿದ ಕುಚಕ್ಕೆ ಬಿಳಿ ರವಿಕೆ ನೇಯಿಸಿ ಹೊಲಿಸಿ ತೊಡಿಸಿ,
ನಾಭಿಯನ್ನು ಹಾಲಿನಿಂದ ತುಂಬಿತು ಹನಿಗಳನ್ನು ಜೊತೆಗೂಡಿಸಿ,
ತಾ ಸವರಿದಲ್ಲೆಲ್ಲ ಮಣ್ಣನ್ನು ಚಿನ್ನೈಸಿ,
ನಲಿಯಿತು ಬೆತ್ತಲೆ ಮೈಗೆ ಹಸಿರು ಸೀರೆ ಉಡಿಸಿ.

ಇಂತಿಪ್ಪ ಮನ್ವಂತರಿಸಿ, ಆಲಿಸಿ ಅವಳ ಮೊರೆ,
ಚೊಚ್ಚಲ ಋತುಮತಿ ಯನ್ನಾಗಿಸಿತು ರತಿಯ ಗೆಳತಿಯ,
ಗರ್ಭಪಾತವಾದಲ್ಲೆಲ್ಲ ಬಿತ್ತಿ ನವ ಪಿಂಡ,
ಹೊಸ ಚಿಗುರಿನಿಂದ ಅಂಗಗಳನ್ನೆಲ್ಲ ಅಲಂಕರಿಸಿತು ಕಂಡ.

ವನವನವ ಉಬ್ಬಿಸಿದ, ಅವಳ ಬಾಯಾಡಿಕೆ ನೀಗಿಸಿದ, ನಿನ್ನ ಸ್ಪರ್ಶ ಮಾನ್ಯ,
ನಗ್ನ ಸುಂದರಿಗೆ ಉಡುಗೆ ತೊಡಿಸಿದ ವರ್ಷಋತು, ನೀನೆ ಧನ್ಯ!!!!!!

- ರಮೇ