Friday, June 23, 2006

ಇವಳೆ...

ಕೋಟಿ ಸೂರ್ಯನ ಕಾಂತಿ ಮೈಗೂಡಿಸಿ ನಕ್ಕಳೊ,
ಇರುಳಾದ ಬಾಳಿನಲ್ಲಿ ಬೆಳಕನ್ನು ತಂದಳೊ,
ಹುಚ್ಚೆದ್ದ ಅಲೆಗಳಂತೆ, ಕನಸಿಗು ಹುರುಪು ಬಂತೆ,
ದಿಕ್ಕಿರದ ಹಾದಿಯಲ್ಲಿ; ಇವಳೆ ಚಂದ್ರಕಾಂತೆ!

ಸುಂದರಾ ಮುಖದ ಕೇಂದ್ರ ಅಗಲವಾದ ಕಂಗಳೋ,
ಅವಳ್ ತುಟಿಯ ಅಂಚಿನಲ್ಲಿ ಹಾಲ್ಜೇನ ಹನಿಗಳೊ,
ರೂಪ ರಾಶಿಯ ರಮಣಿ, ಮಿಂಚು ನೋಟದ ಮೋಹಿನಿ,
ಸಾರಂಗದ ದೃಷ್ಟಿ ದೋಚಿದ; ಇವಳೆ ಮೃಗನಯನಿ!

ಬಿದಿಗೆ ಚಂದ್ರನ ನಾಚಿಸಿವ ಡೊಂಕಾದ ನಡುವಿನವಳೊ,
ಮನ್ಮಥನ ಮಣಿಸಬಲ್ಲ ರತಿಯ ತವರಿನವಳೊ,
ವಾಸುಕಿ ಸ್ಪರ್ಶ ಧನ್ಯೆ, ಸಾಟಿ ಇರದ ಅನನ್ಯೆ,
ಬಳ್ಳಿಯ ನಿದ್ದೆ ಕೆಡಿಸಿದ; ಇವಳೆ ನಾಗಕನ್ಯೆ!

ಸುವಾಸನೆ ಸೂಸುವಂತ ಮಲ್ಲಿಗೆ ವದನದವಳೊ,
ಮುಟ್ಟಿದರೆ ಮಾಸುವಂತ ಕಮಲದ ತೊಗಲಿನವಳೊ,
ಕರೆಯದೆ ಬಂದ ವನಿತೆ, ವರವಾದ ಭಾಗ್ಯದಾತೆ,
ದುಂಬಿಯ ಮೊದಲ ಪ್ರೇಮಿ; ಇವಳೆ ಕುಸುಮಸಂಜಾತೆ!

-ರಮೇ

8 Comments:

Blogger ರಾಮಪ್ರಿಯ said...

ರಮೇ ... ಚೆನ್ನಾಗಿದೆ ನಿನ್ನ ಕವನ ...

ಕೆಲವು ಪದಗಳನ್ನು ಸರಿಪಡಿಸು
ಡೊಂಕಾದ, ಮನ್ಮಥ
ಇವುಗಳು ಇಂಟೆಂಷನಲ್ ಆಗಿದ್ರೆ.. ನಾನು ಗೀಚಿದನ್ನು ಅಳಿಸಿಬಿಡು :)

9:35 PM  
Blogger ಮನ | Mana said...

ಬಣ್ಣ ಬಣ್ಣದ ಬಣ್ಣನೆ
ವರ್ಣಮಯವೀ ವರ್ಣನೆ
ಯಾರಪ್ಪಾ ಈ ಅಂಗನೆ?
ಹೇಳಿಬಿಡು ನೀ ಸುಮ್ಮನೆ

~ ಮನ :)

11:14 PM  
Blogger Phantom said...

ಐಷಣ್ಣ, ಇಂಟೆಂಷನಲ್ಲು ಅಲ್ಲ ಮಣ್ಣು ಅಲ್ಲ. ಟೈಪೋ :)ಬದಲಾಯಿಸ್ದೆ ಕಣ್ಲ. ತಿಳಿಸಿದಕ್ಕೆ ದ.ವಾ.

ಮನವೆ,

ಯಾರು ಇಲ್ಲವೈ ಈ ಅಂಗನೆ
ಎಲ್ಲವು ಕೇವಲ ಕಲ್ಪನೆ

ಮೀಚ್ಚಿಕೊಂಡಿದಕ್ಕೆ ದ.ವಾ.ಗಳು

12:04 AM  
Blogger bhadra said...

ಅಬ್ಬಾ ಎಂತಹ ಕವನ. ಕಾಳಿದಾಸನಿಗೂ ಇಷ್ಟೆಲ್ಲಾ ಕಲ್ಪನೆ ಆಗಿತ್ತೋ ಇಲ್ವೋ? ಸೂಪರ್ ರಮೇಶ್ ಸೂಪರ್.

ಇದನ್ನು ಪತ್ರಿಕೆಗೆ ಕಳುಹಿಸಿ. ಪಡ್ಡೆ ಹುಡುಗರ ಮೈ ನವಿರೇಳಿಸಿ.

ಹಾಗಿದ್ರೆ ಸದ್ಯದಲ್ಲೇ ನಿಮ್ಮ ಮದುವೆಯಾ? ಯಾಕೆ ಕೇಳಿದೆ ಅಂದ್ರೆ, ಇದೇ ತರಹ ಸೂರಿ, ನಂತರ ಚೆಲುವ ರಂಗಣ್ಣ ಬರೆದಿದ್ದರು, ಅವರುಗಳ ಮದುವೆ ಆಗಿಹೋಯ್ತು. ನೀವು ಈಗ ರಸಾಯನದ ಬಗ್ಗೆ ಬರೆದಿದ್ದೀರಿ. ಮುಂದೆ ನಿಮ್ಮ ಮದುವೆಯಾ ಅಂತ ಕೇಳಿದ್ದು ಅಷ್ಟೆ. ನಾಚಿಕೊಳ್ಳಬೇಡಿ, ಪಕ್ಕಕ್ಕೆ ಬರ್ತೀನಿ ಅಲ್ಲಿಯೇ ಹೇಳಿ.

1:40 AM  
Blogger Phantom said...

ತವಿಶ್ರೀ,

ಯಾವ್ ಪತ್ರಿಕೆಗೆ ಕಳಿಸ್ಲಿ? ನನ್ಗೆ ತಿಳಿದಿಲ್ಲ.

ನನ್ನ ಮದುವೆಯು ಇಲ್ಲ ಏನು ಇಲ್ಲ ತವಿಶ್ರೀ. ಒಂದು ಕಲ್ಪನಾ ಲಹರಿ ಅಸ್ಟೆ.

10:59 AM  
Blogger ಮನಸ್ವಿನಿ said...

ಸಿಕ್ಕಿಬಿಟ್ಟರಾ?
ನನ್ನ ಹುಡುಕುವ ಕೆಲಸ ಮುಗಿಯಿತು ಹಾಗಿದ್ರೆ.
ಚಂದದ ಹಾಡು.

8:23 PM  
Blogger Shiv said...

ಭೂತಮಿತ್ರರೇ,

ನಿಮ್ಮ ವರ್ಣನೆ ಅದ್ಬುತವಾಗಿದೆ ! ಒಂದೊಂದು ಪದವನ್ನು ಬಹಳ ಸೊಗಸಾಗಿ ಹೆಣೆದಿದ್ದೀರಾ..

ಅಂದಾಗೆ ಈ 'ಕರೆಯದ ಬಂದ ವನಿತೆ' ಯಾರು :)

ಪಾತರಗಿತ್ತಿಗೆ ಭೇಟಿ ನೀಡಿದಕ್ಕೆ ವಂದನೆಗಳು !

9:38 PM  
Blogger Phantom said...

manaswini hAgu, paataragittiya pakkada maneyavarige vaMdanegaLu.

@manaswini

:(, idu niramtara huDukATavAgide.

@shiv,

bhUtaddu bari kalpaneyalliyE kArubAru.

11:54 PM  

Post a Comment

<< Home