Friday, June 23, 2006

ಇವಳೆ...

ಕೋಟಿ ಸೂರ್ಯನ ಕಾಂತಿ ಮೈಗೂಡಿಸಿ ನಕ್ಕಳೊ,
ಇರುಳಾದ ಬಾಳಿನಲ್ಲಿ ಬೆಳಕನ್ನು ತಂದಳೊ,
ಹುಚ್ಚೆದ್ದ ಅಲೆಗಳಂತೆ, ಕನಸಿಗು ಹುರುಪು ಬಂತೆ,
ದಿಕ್ಕಿರದ ಹಾದಿಯಲ್ಲಿ; ಇವಳೆ ಚಂದ್ರಕಾಂತೆ!

ಸುಂದರಾ ಮುಖದ ಕೇಂದ್ರ ಅಗಲವಾದ ಕಂಗಳೋ,
ಅವಳ್ ತುಟಿಯ ಅಂಚಿನಲ್ಲಿ ಹಾಲ್ಜೇನ ಹನಿಗಳೊ,
ರೂಪ ರಾಶಿಯ ರಮಣಿ, ಮಿಂಚು ನೋಟದ ಮೋಹಿನಿ,
ಸಾರಂಗದ ದೃಷ್ಟಿ ದೋಚಿದ; ಇವಳೆ ಮೃಗನಯನಿ!

ಬಿದಿಗೆ ಚಂದ್ರನ ನಾಚಿಸಿವ ಡೊಂಕಾದ ನಡುವಿನವಳೊ,
ಮನ್ಮಥನ ಮಣಿಸಬಲ್ಲ ರತಿಯ ತವರಿನವಳೊ,
ವಾಸುಕಿ ಸ್ಪರ್ಶ ಧನ್ಯೆ, ಸಾಟಿ ಇರದ ಅನನ್ಯೆ,
ಬಳ್ಳಿಯ ನಿದ್ದೆ ಕೆಡಿಸಿದ; ಇವಳೆ ನಾಗಕನ್ಯೆ!

ಸುವಾಸನೆ ಸೂಸುವಂತ ಮಲ್ಲಿಗೆ ವದನದವಳೊ,
ಮುಟ್ಟಿದರೆ ಮಾಸುವಂತ ಕಮಲದ ತೊಗಲಿನವಳೊ,
ಕರೆಯದೆ ಬಂದ ವನಿತೆ, ವರವಾದ ಭಾಗ್ಯದಾತೆ,
ದುಂಬಿಯ ಮೊದಲ ಪ್ರೇಮಿ; ಇವಳೆ ಕುಸುಮಸಂಜಾತೆ!

-ರಮೇ

Tuesday, June 13, 2006

ಬಾ ಬೆಳಕೆ

ಬಾ ಬೆಳಕೆ ಬಾ ಬೆಳಕೆ ಮರಳಿ ಎನ್ನ ಬಳಿಗೆ,
ಕಾರ್ಮೋಡಗಳ ಮತ್ತೆ ಸೀಳಿ ಕೋಲ್ಮಿಂಚಿನಂತೆ,
ದು:ಖ ದೂಡುವ ನೆವದಿ, ಬೆಳಕೆ ಬಾ ಬಳಿಗೆ!

ಮುಂಜಾನೆ ಮೂಡಣದಿ ನಿನ್ನ ಬೆಳಕೇ ಚೆಲ್ಲಲಿ,
ಅದನ ನೋಡುತ ತಾವರೆ ತನ್ನ ಮೈಯ್ಯ ಮರೆಯಲಿ,
ಪದ್ಮ ಪರಿಮೆಯೊಳಿರುವ ಹೂಗಳೆದೆ ಅಂದ,
ಹಿಗ್ಗಿಸುವ ಅಮೃತವ ಬೆಳಕೆ ತಾ ಬಳಿಗೆ!

ಮುಸುಕು ಕವಿದ ಕಂಗಳಿಗೆ ನಿನ್ನ ಬೆಳಕೆ ಕಾಂತಿಯು,
ಮಬ್ಬು ಹರಿದು, ಜ್ಞಾ ನ ಚಿಗುರಿ, ದೂರವಾಗಲಿ ಚಿಂತೆಯು,
ಮನದಲ್ಲಿ ಆಶಯದ ಮಳೆಬಿಲ್ಲು ಮೂಡಿದೆ,
ವರ್ಣ ವೃದ್ಧಿಸುವ ಕುಂಚ, ಬೆಳಕೆ ತಾ ಬಳಿಗೆ!

-ರಮೇ